ಕೊಲಂಬಿಯದ ಇತಿಹಾಸ

 	ಕೊಲಂಬಿಯ ದೇಶದ ಇತಿಹಾಸವನ್ನು ಪ್ರಾಚೀನ, ಆಧುನಿಕ ಎಂದು ಸ್ಥೂಲವಾಗಿ ಎರಡು ವಿಭಾಗಗಳಾಗಿ ಮಾಡಬಹುದು. ಐರೋಪ್ಯರು ಕೊಲಂಬಿಯಕ್ಕೆ ಬಂದು ನೆಲೆ ನಿಲ್ಲುವುದಕ್ಕೆ ಮುಂಚಿನದು ಪ್ರಾಚೀನ ಕಾಲ. ಈಚಿನದು ಆಧುನಿಕ ಕಾಲ.

	ಕೊಲಂಬಿಯದ ಪ್ರಾಚೀನ ಇತಿಹಾಸವನ್ನು ತಿಳಿದುಕೊಳ್ಳಲು ಲಿಖಿತ ದಾಖಲೆಗಳು ದೊರೆತಿಲ್ಲ. ಆದರೆ ಪುರಾತತ್ವಜ್ಞರು ಕಂಡುಹಿಡಿದಿರುವ ಪ್ರಾಚೀನ ಸಂಸ್ಕøತಿಯ ಕೆಲವು ಕುರುಹುಗಳಿಂದ ಕೊಲಂಬಿಯದ ಇತಿಹಾಸವನ್ನು ಸ್ಥೂಲವಾಗಿ ಗುರುತಿಸಬಹುದು. ಇಲ್ಲಿಯ ಮೂಲನಿವಾಸಿಗಳು ರೆಡ್ ಇಂಡಿಯನ್ ಜನಾಂಗಕ್ಕೆ ಸೇರಿದವರು. ಕೊಲಂಬಿಯದ ಪ್ರಾಚೀನ ಸಂಸ್ಕøತಿಯನ್ನು ರೂಪಿಸಿದವರಲ್ಲಿ ಮುಖ್ಯವಾದವರು ಚಿಬ್‍ಛಾ ಜನಾಂಗ. ದಕ್ಷಿಣ ಅಮೆರಿಕದಲ್ಲಿ ಪ್ರಸಿದ್ಧವಾಗಿದ್ದ ಇನ್‍ಕ ಸಂಸ್ಕøತಿಯ ಪ್ರಭಾವದಿಂದ ಪ್ರೇರೇಪಿತರಾದ ಈ ಜನ ತಮ್ಮದೇ ಆದ ಒಂದು ವಿಶಿಷ್ಟ ಸಂಸ್ಕøತಿಯನ್ನು ರೂಪಿಸಿಕೊಂಡರು. ಗುಂಪಿನ ಮುಖಂಡನೇ ರಾಜಕೀಯ ಮುಖಂಡ. ಕಟ್ಟಡಕ್ಕೆ ಕಲ್ಲನ್ನು ಬಳಸುವುದು ಈ ಜನರಿಗೆ ಗೊತ್ತಿರಲಿಲ್ಲ. ಮ್ಯಾಗ್ಡಲೀನ ಪಟ್ಟಣದ ಬಳಿಯಲ್ಲಿರುವ ಸ್ಯಾನ್ ಆಗಸ್ಟಿನ್‍ನಲ್ಲಿರುವ ಐತಿಹಾಸಿಕ ಅವಶೇಷದಿಂದ ಅನೇಕ ವಿಷಯಗಳು ಬೆಳಕಿಗೆ ಬಂದಿವೆ. ಮಡಕೆ ಮಾಡುವುದರಲ್ಲೂ ಚಿನ್ನದ ಆಭರಣಗಳನ್ನು ತಯಾರಿಸುವುದರಲ್ಲೂ ಕೆತ್ತನೆ ಕೆಲಸದಲ್ಲೂ ಈ ಜನ ಬಹಳ ಮುಂದುವರಿದಿದ್ದರು. ಚಿನ್ನವನ್ನು ಸಾಮಾನ್ಯವಾಗಿ ಎಲ್ಲ ಕಾರ್ಯಗಳಲ್ಲೂ, ಮುಖ್ಯವಾಗಿ ದೇವರ ಪೂಜೆಗಳಲ್ಲಿ, ವಿಶೇಷವಾಗಿ ಉಪಯೋಗಿಸುತ್ತಿದ್ದರು. ಚಿನ್ನವನ್ನು ಹುಡಿಯಾಗಿಯೋ ಆಭರಣಗಳನ್ನು ಮಾಡಿಯೋ ದೇವರಿಗೆ ಅರ್ಪಿಸುವುದು ಚಿಬ್‍ಛಾ ಜನರ ಪದ್ಧತಿಯಾಗಿತ್ತು. ಕೆಲವು ಪೂಜಾವಿಧಾನಗಳಿಗೆ ಅನುಗುಣವಾಗಿ ಚಿನ್ನವನ್ನು ಕೆರೆಗೆ ಎಸೆಯುವ ಅಥವಾ ದಂಡೆಯ ಮೇಲೆ ಹೂಳಿಡುವ ಪದ್ಧತಿಯಿತ್ತು. ಈ ಜನ ಪ್ರಕೃತಿಯನ್ನು-ಸೂರ್ಯ, ಚಂದ್ರ, ಮಳೆ ಮತ್ತು ಕೆರೆಗಳನ್ನು-ಪೂಜಿಸುತ್ತಿದ್ದರು. ಸೃಷ್ಟಿಕಾರ್ಯ ನಡೆಸುವ ದೇವತೆಗಳ ಸಾಂಸ್ಕøತಿಕ ಮುಖಂಡತ್ವವನ್ನು ವಹಿಸುವ ದೇವತೆಗಳ ಗುಂಪೇ ಇವರ ಧಾರ್ಮಿಕ ನಂಬಿಕೆಗಳಲ್ಲಿ ಪ್ರಧಾನವಾಗಿತ್ತು. ನರಬಲಿ ರೂಢಿಯಲ್ಲಿತ್ತು. ಒಟ್ಟಿನಲ್ಲಿ ಕೊಲಂಬಿಯದ ಪ್ರಾಚೀನ ಸಂಸ್ಕøತಿ ಬುಡಕಟ್ಟಿನ ಸಂಸ್ಕøತಿಯಾಗಿತ್ತೇ ಹೊರತು, ಪ್ರಾಚೀನ ಭಾರತ, ಈಜಿಪ್ಟ್, ಮೆಸಪೊಟೇಮಿಯದ ಸಂಸ್ಕøತಿಗಳಷ್ಟು ಮುಂದುವರಿದ ಸಂಸ್ಕøತಿಯಾಗಿರಲಿಲ್ಲ.

	ಸ್ಪೇನ್ ದೇಶದ ನಾವಿಕರು ಕೊಲಂಬಿಯವನ್ನು ಪ್ರವೇಶಿಸಿದಂದಿನಿಂದ ಆ ದೇಶದ ಇತಿಹಾಸದಲ್ಲಿ ಆಧುನಿಕ ಯುಗ ಪ್ರಾರಂಭವಾಯಿತು. 1510ರಲ್ಲಿ ಡೇರಿಯನ್‍ನಲ್ಲಿ ಮೊದಲನೆಯ ಐರೋಪ್ಯ ನೆಲೆ ಸ್ಥಾಪಿತವಾಯಿತು. 1525ರಲ್ಲಿ ರೋಡ್ರಿಗೋ ಡು ಬಸ್ಟಿಡಾಸ್ ಎಂಬ ಸ್ಪಾನಿಷ್ ಸಾಹಸಿ ಸಾಂತಮಾರ್ತ ಎಂಬ ಮತ್ತೊಂದು ವಸಾಹತನ್ನು ಸ್ಥಾಪಿಸಿದ. ಸಾಂತಮಾರ್ತ ನೆಲೆಯಿಂದಲೇ ಮುಂದೆ ನ್ಯೂ ಗ್ರನಾಡ ವಸಾಹತು ಹುಟ್ಟಿಕೊಂಡಿತು. 1861ರ ವರೆಗೆ ಕೊಲಂಬಿಯವನ್ನು ನ್ಯೂ ಗ್ರನಾಡ ಎಂದೇ ಕರೆಯುತ್ತಿದ್ದರು. ಗೊಂಜಾಲೋ ಜಿಮನೆಜ್ ಡಿ ಕ್ವೆಸಡಾ ಎಂಬ ಸ್ಪಾನಿಷ್ ಸಾಹಸಿ ಸಾಂತಮಾರ್ತ ತೀರಪ್ರದೇಶದಿಂದ ಒಳಭಾಗಕ್ಕೆ ಮುಂದುವರಿದು ಹೋಗಿ ಆಗಸ್ಟ್ 6, 1538ರಂದು ಬೋಗೊಟಾ ಪಟ್ಟಣವನ್ನು ಸ್ಥಾಪಿಸಿದ. ಅನಂತರ ಕೆಲವೇ ವರ್ಷಗಳಲ್ಲಿ ಅನೇಕ ಸಣ್ಣ ಪುಟ್ಟ ಐರೋಪ್ಯ ವಸಾಹತುಗಳು ಕೊಲಂಬಿಯದಲ್ಲೆಲ್ಲ ತಲೆಯೆತ್ತಿದುವು. ಆದರೆ ಸುಭದ್ರವಾದ ಕೋಟೆಯನ್ನು ಪಡೆದಿದ್ದ ಕಾರ್ಟಿಜೀನಪಟ್ಟಣ ಸ್ಪಾನಿಷರ ಕಾಲದಲ್ಲಿ ಉದ್ದಕ್ಕೂ ಪರಕೀಯರ ದಾಳಿಗೆ ನೇರ ಗುರಿಯಾಗಿತ್ತು.

	ಸ್ಪೇನ್ ದೇಶಕ್ಕೆ ಸೇರಿದ ನ್ಯೂ ಗ್ರನಾಡ ಅಥವಾ ಕೊಲಂಬಿಯ ವಸಾಹತು ಪೆರುವಿನಲ್ಲಿದ್ದ ವೈಸ್‍ರಾಯನ ಆಡಳಿತಕ್ಕೆ 1740ರ ವರೆಗೆ ಒಳಪಟ್ಟಿತ್ತು. ಆ ವರ್ಷ ನ್ಯೂ ಗ್ರನಾಡಕ್ಕೆ ಪ್ರತ್ಯೇಕವಾಗಿ ಒಬ್ಬ ವೈಸ್‍ರಾಯನ್ನು ಸ್ಪೇನ್ ಸರ್ಕಾರ ನೇಮಿಸಿತು. ಅವನ ಅಧಿಕಾರಕ್ಕೆ ನ್ಯೂ ಗ್ರನಾಡವಲ್ಲದೆ ಪನಾಮ, ಎಕ್ವಡಾರ್ ಮತ್ತು ವೆನಿಜ್ವೀಲ ಪ್ರದೇಶಗಳೂ ಒಳಪಟ್ಟಿದ್ದುವು. ಭೌಗೋಳಿಕವಾಗಿ ನ್ಯೂ ಗ್ರನಾಡಕ್ಕೆ ಹೊರಗಿನ ಸಂಪರ್ಕ ಹೆಚ್ಚಾಗಿರಲಿಲ್ಲವಾದ ಕಾರಣ, ಸ್ಪೇನ್ ಸರ್ಕಾರ ಈ ಪ್ರದೇಶದ ಪ್ರಗತಿಗೆ ಅಷ್ಟಾಗಿ ಗಮನ ಕೊಡಲಿಲ್ಲ. 18ನೆಯ ಶತಮಾನದ ಕೊನೆಯ ಭಾಗದಲ್ಲಿ ಕೊಲಂಬಿಯದಲ್ಲಿ ಸ್ಪೇನ್ ಆಡಳಿತದ ಬಗ್ಗೆ ಅಸಮಾಧಾನ ಮೂಡಿತ್ತು.

	19ನೆಯ ಶತಮಾನದ ಪೂರ್ವಭಾಗ ಕೊಲಂಬಿಯದ ಆಧುನಿಕ ಇತಿಹಾಸದಲ್ಲಿ ಒಂದು ಪರ್ವಕಾಲ. ಉತ್ತರ ಅಮೆರಿಕದಲ್ಲಿ ಈಗಿನ ಸಂಯುಕ್ತ ಸಂಸ್ಥಾನದ ಪೂರ್ವಜರು ಬ್ರಿಟಿಷ್ ವಸಾಹತು ನೀತಿಯನ್ನು ಎದುರಿಸಿ, ಹೋರಾಟ ನಡೆಸಿ 18ನೆಯ ಶತಮಾನದ ಕೊನೆಯ ವೇಳೆಗೆ ಸ್ವಾತಂತ್ರ್ಯ ಗಳಿಸಿಕೊಂಡಿದ್ದರು. ಅಮೆರಿಕನರು ನಡೆಸಿದ ಕ್ರಾಂತಿ ಕೊಲಂಬಿಯದ ಮೇಲೂ ಪ್ರಭಾವ ಬೀರಿತ್ತು. ಕೊಲಂಬಿಯದ ಜನ ಸ್ಪೇನಿನ ಶೋಷಣೆಯಿಂದ ರೊಚ್ಚಿಗೆದ್ದರು. 1811ರಲ್ಲಿ ಸ್ಪೇನಿನ ನಿರಂಕುಶ ಪ್ರಭುತ್ವದ ವಿರುದ್ಧ ದಂಗೆಯೆದ್ದರು. ಈ ದಂಗೆ ಯುದ್ಧವಾಗಿ ಮಾರ್ಪಾಡುಹೊಂದಿ 1824ರ ವರೆಗೂ ಮುಂದುವರಿಯಿತು. ಕೊಲಂಬಿಯದ ಸ್ವಾತಂತ್ರ್ಯಸಂಗ್ರಾಮದ ಮುಖಂಡ ದಕ್ಷಿಣ ಅಮೆರಿಕದ ಇತಿಹಾಸದಲ್ಲೇ ಪ್ರಸಿದ್ಧನಾದ ಸೈಮನ್ ಬೊಲಿವರ್ (1783-1830). ಆತ ಒಬ್ಬ ಸಾಹಸಿ, ಯೋಧ, ಪ್ರತಿಭಾವಂತ ಸೇನಾನಿ, ಮೇಲಾಗಿ ಸ್ವಾತಂತ್ರ್ಯಪ್ರಿಯ. ಅವನ ಜೀವನ ವೈವಿಧ್ಯಮಯವಾದ್ದು. ಆತ ಸುಮಾರು 200 ಕದನಗಳ ನಾಯಕ. ಸಾಹಸ, ವೈಭವ, ಜಯ, ಅಪಜಯಗಳನ್ನೆಲ್ಲ ಅನುಭವಿಸಿದ ಆ ಮುಖಂಡನ ನಾಯಕತ್ವದಲ್ಲಿ ಕಡೆಗೆ ಕೊಲಂಬಿಯ ಸ್ಪೇನಿನ ದಾಸ್ಯದಿಂದ ಬಿಡುಗಡೆ ಹೊಂದಿತು. 1831ರಲ್ಲಿ ಪನಾಮಾವನ್ನೂ ಒಳಗೊಂಡಂತೆ ನ್ಯೂ ಗ್ರನಾಡ ಗಣರಾಜ್ಯದ ಸ್ಥಾಪನೆಯಾಯಿತು. ಅದಕ್ಕೊಂದು ಸಂವಿಧಾನವೂ ರೂಪುಗೊಂಡಿತು. 1903ರ ವರೆಗೆ ಕೊಲಂಬಿಯದಲ್ಲಿ ಅಂತರ್ಯುದ್ಧಗಳು ನಡೆದುವು. 1861ರಲ್ಲಿ ಅಧ್ಯಕ್ಷ ಥಾಮಸ್ ಡು ಮೊಸ್ಕೇರಾನ ಸರ್ಕಾರ ಚರ್ಚಿನ ಅಧಿಕಾರವನ್ನು ಮೊಟಕುಗೊಳಿಸುವ ಕಾಯಿದೆಯನ್ನು ಜಾರಿಗೆ ತಂದು, ಚರ್ಚಿನ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತು. 1861ರಲ್ಲಿ ಈ ದೇಶಕ್ಕೆ ಕೊಲಂಬಿಯ ಸಂಯುಕ್ತಸಂಸ್ಥಾನ ಎಂಬ ಹೆಸರನ್ನು ಕೊಡಲಾಯಿತು.

	ಕೊಲಂಬಿಯ ಸ್ವತಂತ್ರ ರಾಷ್ಟ್ರವೇನೋ ಆಯಿತು. ಆದರೆ ದೇಶದ ಸಂಪನ್ಮೂಲಗಳನ್ನು, ಸಾರಿಗೆ ಸಂಪರ್ಕಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಸಮಗ್ರ ಪ್ರಗತಿ ಸಾಧಿಸಲು ಬೇಕಾದ ಶಾಂತ ವಾತಾವರಣ ಅದಕ್ಕೆ ಒದಗಲಿಲ್ಲ. ಆದ ಕಾರಣ ಆರ್ಥಿಕವಾಗಿ ಕೊಲಂಬಿಯ ಹಿಂದುಳಿಯಿತು. ಇದರ ಜೊತೆಗೆ ಕೊಲಂಬಿಯದ ನಗರಗಳೂ ಹಳ್ಳಿಗಳೂ ಪರಸ್ಪರ ಸಂಪರ್ಕ ಹೊಂದದೆ, ದೇಶದ ಜನಸಂಖ್ಯೆ ಚದುರಿ ಹೋಗಿದ್ದರಿಂದ, ಆರ್ಥಿಕ ಪ್ರಗತಿ ಸಾಧಿಸುವುದು ಕಷ್ಟವಾಯಿತು. ಪನಾಮಾ ಪ್ರಾಂತ್ಯ ಕೈಬಿಟ್ಟುಹೋದ್ದು (1903) ಕೊಲಂಬಿಯದ 20ನೆಯ ಶತಮಾನದ ಇತಿಹಾಸದ ಪ್ರಮುಖ ಘಟನೆ. ಪನಾಮಾ ಒಂದು ಆಯಕಟ್ಟಿನ ಪ್ರದೇಶ: ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳನ್ನು ಒಂದುಗೂಡಿಸುವ ಸಾಧ್ಯತೆಯನ್ನು ಹೊಂದಿದ್ದ ಭೂಭಾಗ, ಅಲ್ಲಿಯ ಜನ ಕೊಲಂಬಿಯದಿಂದ ಸ್ವತಂತ್ರರಾದಾಗ ಹೊಸ ರಾಷ್ಟ್ರಕ್ಕೆ ಅಮೆರಿಕ ಮನ್ನಣೆ ಕೊಟ್ಟಿತು. ಅಮೆರಿಕ ಪನಾಮಾದಲ್ಲಿ ಕಾಲುವೆಯೊಂದನ್ನು ತೋಡಿಸಿ ಎರಡು ಸಾಗರಗಳನ್ನು ಸೇರಿಸುವ ಯೋಜನೆಹೊಂದಿದ್ದುದೇ ಇದಕ್ಕೆ ಕಾರಣ. ಇದರಿಂದ ಕೊಲಂಬಿಯ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳ ನಡುವೆ ವಿರಸಕ್ಕೆ ಎಡೆ ಕೊಟ್ಟಂತಾಯಿತು. ಪನಾಮಾದ ಬೇರ್ಪಡೆಯಿಂದಾಗಿ ಉಂಟಾದ ಈ ವಿರಸ ಥಾಮ್ಸನ್-ಉರ್ರುಟಿಯ ಒಪ್ಪಂದದೊಡನೆ ಮುಕ್ತಾಯಗೊಂಡಿತು. ಕೊಲಂಬಿಯದ ಸಂಸತ್ತು ಈ ಒಪ್ಪಂದಕ್ಕೆ ತನ್ನ ಒಪ್ಪಿಗೆಯನ್ನು 1921ರ ಡಿಸೆಂಬರಿನಲ್ಲಿ ನೀಡಿತು. ಕೊಲಂಬಿಯ ಪನಾಮಾವನ್ನು ಕಳೆದುಕೊಂಡಿದ್ದರಿಂದ ಅದಕ್ಕೆ ಅಮೆರಿಕ 2.5 ಕೋಟಿ ಡಾಲರ್‍ಗಳಷ್ಟು ಪರಿಹಾರಧನ ಕೊಡತಕ್ಕದ್ದೆಂದು ತೀರ್ಮಾನವಾಯಿತು. ಈ ಹಣವನ್ನು ಅದು ಐದು ವಾರ್ಷಿಕ ಕಂತುಗಳಲ್ಲಿ ಕೊಟ್ಟಿತು. ಇದಕ್ಕೆ ಬದಲಾಗಿ ಕೊಲಂಬಿಯ ಪನಾಮಾ ಸರ್ಕಾರಕ್ಕೆ ಮನ್ನಣೆ ನೀಡಬೇಕಾಯಿತು.

	1922ರ ಆಗಸ್ಟ್‍ನಲ್ಲಿ ಜನರಲ್ ಪೆಡ್ರೋ ನೀಲ್ ಓಸ್‍ಪಿನ ಅಧ್ಯಕ್ಷನಾದ. ಇವನ ಆಡಳಿತದ ಕಾಲದಲ್ಲಿ ಕೊಲಂಬಿಯದಲ್ಲಿ ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯುಂಟಾಯಿತು. ರೈಲು ಮತ್ತು ರಸ್ತೆ ಸಾರಿಗೆ ಸಂಪರ್ಕಗಳನ್ನು ಕಲ್ಪಿಸಲಾಯಿತು. ಸಾರ್ವಜನಿಕ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಗಳಾದುವು. 1926ರಲ್ಲಿ ಮೈಗೂಲ್ ಅಬಾದಿಯಾ ಮೆಂಡೆಜ್ ನಾಲ್ಕು ವರ್ಷಗಳ ಅವಧಿಗೆ ಅಧ್ಯಕ್ಷನಾಗಿ ಚುನಾಯಿತನಾದ. ನೂರಾರು ವರ್ಷಗಳಿಂದ ನಿಕರಾಗ್ವದೊಡನಿದ್ದ ಗಡಿ ವಿವಾದ ಮಾರ್ಚ್ 1928ರ ಒಪ್ಪಂದದೊಡನೆ ತೀರ್ಮಾನವಾಯಿತು. ಇದರ ಪ್ರಕಾರ ಮಸ್ಕಿಟೋ ಕೋಸ್ಟ್ ಮತ್ತು ಗ್ರೇಟ್ ಮತ್ತು ಲಿಟಲ್‍ಕಾರನ್ ದ್ವೀಪಗಳು ನಿಕರಾಗ್ವಕ್ಕೂ ಆಂಡ್ರೆಸ್ ಪರ್ಯಾಯದ್ವೀಪದ ಕೆಲವು ದ್ವೀಪಗಳು ಕೊಲಂಬಿಯಕ್ಕೂ ಸೇರಿದುವು.

	ಹತ್ತೊಂಬತ್ತನೆಯ ಶತಮಾನದ ಕೊನೆಯ ವೇಳೆಗೆ ಕೊಲಂಬಿಯದಲ್ಲಿ ಕನ್ಸರ್ವೆಟಿವ್ ಮತ್ತು ಲಿಬರಲ್ ಎಂಬ ಎರಡು ಪ್ರಧಾನ ರಾಜಕೀಯ ಪಕ್ಷಗಳು ರೂಪುಗೊಂಡುವು. ಕನ್ಸರ್ವೆಟಿವ್ ಪಕ್ಷ 1885ರಿಂದ 1930ರ ವರೆಗೆ ಅಧಿಕಾರದಲ್ಲಿದ್ದರೆ, ಲಿಬರಲ್ ಪಕ್ಷ 1930ರಿಂದ 1946ರ ವರೆಗೆ ಅಧಿಕಾರದಲ್ಲಿತ್ತು. 1930 ರಿಂದ 1934ರ ವರೆಗೆ ಅಧ್ಯಕ್ಷನಾಗಿದ್ದ ಎನ್‍ರಿಕ್ ಓಲಯ ಹೆರ್ರೇರನ ಕಾಲದಲ್ಲಿ ದೇಶ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಯಿತು. ಆಗ ಅನೇಕ ಆರ್ಥಿಕ ನಿಯಂತ್ರಣಗಳನ್ನು ಜಾರಿಗೆ ತರಲಾಯಿತು. 1934ರಲ್ಲಿ ಆಲ್ಫಾನ್ಸೊ ಲೊಪೆeóï ಅಧ್ಯಕ್ಷನಾಗಿ ಚುನಾಯಿತನಾದ. ಆತ ಹೊಸ ಆರ್ಥಿಕ ಯೋಜನೆಯೊಂದನ್ನು ಜಾರಿಗೆ ತಂದ. ಕಾರ್ಮಿಕರಿಗೆ ಎಂಟು ಗಂಟೆಗಳ ಕೆಲಸದ ಪರಿಮಿತಿಯನ್ನೂ ಮುಷ್ಕರ ನಡೆಸುವ ಹಕ್ಕನ್ನೂ ಕಾಯಿದೆಗಳ ಮೂಲಕ ಕೊಡಲಾಯಿತು. ಲೊಪೆeóï ರೋಮನ್ ಕೆಥೊಲಿಕ್ ಚರ್ಚಿನ ಅಧಿಕಾರವನ್ನು ಮೊಟಕುಗೊಳಿಸುವ ಕಾಯಿದೆಗಳನ್ನು ಜಾರಿಗೆ ತಂದ. 1938ರಲ್ಲಿ ಎಡ್ಯೂರ್ಡೋ ಸಾಂಟೋಸ್ ಅಧ್ಯಕ್ಷಸ್ಥಾನಕ್ಕೆ ಚುನಾಯಿತನಾದ. ಈತನ ಅಧಿಕಾರಾವಧಿಯಲ್ಲಿ ಪ್ರಗತಿಪರ ನೀತಿಗಳನ್ನು ಜಾರಿಗೆ ತರಲಾಯಿತು.

	1942ರಲ್ಲಿ ಲೊಪೆeóï ಮತ್ತೆ ಅಧಿಕಾರಕ್ಕೆ ಬಂದು, ಆಗಸ್ಟ್ 1945ರಲ್ಲಿ ಆಲ್ಬರ್ಟೋ ಲೇರಾಸ್ ಕಮಾರ್ಗೋ ಪರವಾಗಿ ರಾಜೀನಾಮೆ ಕೊಟ್ಟ. 1946ರ ಚುನಾವಣೆಯಲ್ಲಿ ಕನ್ಸರ್ವೆಟಿವ್ ಪಕ್ಷದ ಮರಿಯಾನೋ ಓಸ್‍ಪಿನಾ ಪೆರೆeóï ಅಧ್ಯಕ್ಷಸ್ಥಾನಕ್ಕೆ ಚುನಾಯಿತನಾದ. ಅವನ ಸರ್ಕಾರದಲ್ಲಿ ಲಿಬರಲ್ ಪಕ್ಷದವರಿಗೆ ಸ್ಥಾನಮಾನಗಳನ್ನು ಕೊಡಲಿಲ್ಲ. 1948ರಲ್ಲಿ ಲಿಬರಲ್ ಪಕ್ಷದ ನಾಯಕ ಗೈಟಾನ್ ಕೊಲೆಯಾದ. ಈ ವಾಮಪಂಥೀಯ ನಾಯಕನ ಕೊಲೆಯಿಂದಾಗಿ ದೇಶದಲ್ಲಿ ಎರಡು ಪಕ್ಷಗಳ ನಡುವೆ ಹಿಂಸಾತ್ಮಕ ಹೋರಾಟ ಪ್ರಾರಂಭವಾಯಿತು. ಇದರ ಫಲವಾಗಿ 1957ರ ವೇಳೆಗೆ 2,60,000 ಜನ ಮಡಿದರು. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. 1930ರಲ್ಲಿ ಸಂಪ್ರದಾಯವಾದಿ ಲೊರೆನೋ ಗೊಮೆeóï ಅಧಿಕಾರಕ್ಕೆ ಬಂದ. ಆದರೆ ಸೇನಾ ಮುಖಂಡ ಜನರಲ್ ಗುಸ್ತಾರೊ ರೋಜಾ¸óï ಕ್ಷಿಪ್ರಾಕ್ರಮಣ ನಡೆಸಿ ಗೊಮೆಜûನನ್ನು ಅಧಿಕಾರದಿಂದ ತಳ್ಳಿ ತಾನೇ ಅಧ್ಯಕ್ಷನಾದ. 1957ರಲ್ಲಿ ಸೇನಾ ಗುಂಪೊಂದು ರೋಜಾóಸನನ್ನು ತಳ್ಳಿಹಾಕಿತು. ಆ ವರ್ಷವೇ ಚುನಾವಣೆ ನಡೆಸುವುದಕ್ಕೆ ವ್ಯವಸ್ಥೆ ಮಾಡಲಾಯಿತು. ಹನ್ನೆರಡು ವರ್ಷಗಳ ಕಾಲ ಕನ್ಸರ್ವೆಟಿವ್ ಮತ್ತು ಲಿಬರಲ್ ಪಕ್ಷಗಳು ಸಮಸಮವಾಗಿ ಸರ್ಕಾರದ ಮೂರು ಅಂಗಗಳಲ್ಲೂ ಪ್ರತಿನಿಧಿಗಳನ್ನು ಪಡೆದಿರತಕ್ಕದೆಂದು ಸಂವಿಧಾನದಲ್ಲಿ ತಿದ್ದುಪಡಿ ಮಾಡಲು ತೀರ್ಮಾನವಾಯಿತು. ಸಾರ್ವಜನಿಕರ ಒಪ್ಪಿಗೆ ಈ ತಿದ್ದುಪಡಿಗೆ ದೊರೆಯಿತು. ಸ್ಥಳೀಯ ಸಂಸ್ಥೆಗಳಲ್ಲೂ ಇದೇ ಕ್ರಮವನ್ನು ಜಾರಿಗೆ ತರಲಾಯಿತು. ಇದರಿಂದ ಎರಡೂ ಪಕ್ಷಗಳ ಸ್ಪರ್ಧೆಯಿಂದಾಗುವ ತೀವ್ರವಾದ ಅಶಾಂತಿ ಕೊನೆಗೊಳ್ಳುವಂತಾಯಿತು. ಕನ್ಸರ್ವೆಟಿವ್ ಪಕ್ಷದ ಲೇರಾಸ್ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತರಲು ಹಿಂದೆಗೆಯುತ್ತಿದ್ದಾನೆಂದು ಪ್ರತಿಪಕ್ಷ ಆಪಾದಿಸಿದ್ದರಿಂದ 1968ರಲ್ಲಿ ಆತನ ಸಂಪುಟ ರಾಜೀನಾಮೆ ನೀಡಿತು. 1969ರಲ್ಲಿ ಸರ್ಕಾರಕ್ಕೂ ಕಾರ್ಮಿಕರಿಗೂ ನಡುವೆ ಭಿನ್ನಾಭಿಪ್ರಾಯ ತಲೆದೋರಿ, ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಯಿತು. ಎಲ್ಲೆಲ್ಲೂ ದಂಗೆಗಳಾದುವು. ಹೀಗೆ ಕೊಲಂಬಿಯದ ಆಂತರಿಕ ರಾಜಕೀಯ ಪರಿಸ್ಥಿತಿ ಹದಗೆಟ್ಟು, ಆರ್ಥಿಕ ಪ್ರಗತಿಗೆ ಅಡ್ಡಿಆತಂಕಗಳನ್ನೊಡ್ಡಿತು. ದಕ್ಷಿಣ ಅಮೆರಿಕದ ಐದು ರಾಷ್ಟ್ರಗಳನ್ನೊಳಗೊಂಡ ಆಂಡಿಯನ್ ಸಾಮಾನ್ಯ ಮಾರುಕಟ್ಟೆಗೆ 1969ರಲ್ಲಿ ಕೊಲಂಬಿಯವೂ ಸೇರಿಕೊಂಡಿತು. ಇಂದು ಕೊಲಂಬಿಯ ಏಷ್ಯದ ಮತ್ತು ದಕ್ಷಿಣ ಅಮೆರಿಕದ ಇತರ ರಾಷ್ಟ್ರಗಳಂತೆ ಆಂತರಿಕವಾಗಿ ಶಾಂತಿ ಸ್ಥಾಪಿಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಲು ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ. 		(ಎಸ್.ಕೆ.ಎಸ್.; ಪಿ.ಎಂ.ಯು.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ